ನಂದಭದ್ರ
	ಸ್ಕಾಂದಪುರಾಣದಿಂದ ತಿಳಿದು ಬರುವಂತೆ ಇವನೊಬ್ಬ ವೈಶ್ಯ. ನಾರದ ಅರ್ಜುನನಿಗೆ ಈತನ ಮಹಾತ್ಮೆಯನ್ನು ಕೌಮಾರಿಕಾ ಕಾಂಡದಲ್ಲಿ ತಿಳಿಸುತ್ತಾನೆ. ವಾಣಿಜ್ಯವನ್ನು ವೃತ್ತಿಯಾಗುಳ್ಳ ಈತ ಮಹೀಸಾಗರದಲ್ಲಿರುವ ಬಹುದೂಕ ಸರೋವರದ ಬಳಿ ಕಪಿಲ ಮುನಿಯಿಂದ ಸ್ಥಾಪಿತವಾದ ಕಪಿಲೇಶ್ವರ ಎಂಬ ಶಿವಲಿಂಗವನ್ನು ಸದಾ ಭಕ್ತಿಯಿಂದ ಪೂಜಿಸುತ್ತಿದ್ದ. ಈತ ವೇದಶಾಸ್ತ್ರ ರಹಸ್ಯಗಳನ್ನೆಲ್ಲ ಬಲ್ಲವನಾಗಿದ್ದು ಸಕಲ ಶಿವಧರ್ಮವನ್ನೂ ತಿಳಿದಿದ್ದ. ಯಜ್ಞಯಾಗಾದಿಗಳೇ ಮುಕ್ತಿಯ ಸೋಪಾನವಲ್ಲ, ಸಂನ್ಯಾಸಾಶ್ರಮವೇ ಶ್ರೇಷ್ಠವಲ್ಲ, ಕೃಷಿ ಹೇಯವಾದದ್ದು, ಐಹಿಕ ಸಂಪತ್ತು ತೃಣಸಮ ಎಂದು ತಿಳಿದಿದ್ದ ಈತ, ಪ್ರಪಂಚವು ನಶ್ವರವೂ ದೋಷಪೂರ್ಣವೂ ಆದುದೆಂದು ಬಗೆದು ಮೋಕ್ಷಕ್ಕೆ ಅನುಕೂಲವಾದ ಶಿವಾರಾಧನೆಯನ್ನೇ ತನ್ನ ಮುಖ್ಯ ಗುರಿಯನ್ನಾಗಿ ಸ್ವೀಕರಿಸಿದ್ದ. ಆಚಾರಶೀಲನಾದ ಇವನ ಭಕ್ತಿಗೆ ಇಂದ್ರಾದಿ ದೇವತೆಗಳೂ ಮೆಚ್ಚಿದ್ದರು.

	ಮಹೀಸಾಗರದ ಸಂಗಮದಲ್ಲಿಯೇ ನಾಸ್ತಿಕನೂ ದುರಾಚಾರಿಯೂ ಆದ ಸತ್ಯವ್ರತನೆಂಬ ಶೂದ್ರನಿದ್ದ. ನಂದಭದ್ರನ ಬಗ್ಗೆ ಅಸೂಯೆ ತಾಳಿದ್ದ ಈತ ಅವನಲ್ಲಿ ದೋಷವನ್ನೇ ಹುಡುಕುತ್ತಿದ್ದ. ಇಂಥ ಸಂದರ್ಭದಲ್ಲಿ ನಂದಭದ್ರನ ಮಗ ಸತ್ತು ಹೋದ. ಈ ಸಾವನ್ನು ಜ್ಞಾನಿಯಾದ ನಂದಭದ್ರ ತೀವ್ರವಾಗಿ ತೆಗೆದುಕೊಳ್ಳಲಿಲ್ಲ. ಹೆಂಡತಿ ಸತ್ತಾಗ ಮಾತ್ರ ದುಃಖದ ಭಾರವನ್ನು ಹೊರಲಾರದಾದ. ಆಗ ಸಾಂತ್ವನಗೊಳಿಸುವ ನೆವದಲ್ಲಿ ಸತ್ಯವ್ರತ ಬಂದು ನಂದಭದ್ರನ ಆಸ್ತಿಕತೆಯನ್ನು ನಿಂದಿಸಿ, ನಾಸ್ತಿಕವಾದವನ್ನು ಬೋಧಿಸಿದ. ಆದರೆ ನಂದಭದ್ರ ಅವನ ಬೋಧನೆಗೆ ಕಿವಿಗೊಡದೆ ಶಿವಭಕ್ತಿಯ ಸ್ವರೂಪವನ್ನು ವಿವರಿಸಿ, ಆತನನ್ನು ಬೀಳ್ಕೊಟ್ಟ. ತರುವಾಯ ತಾನು ಸೂರ್ಯಕುಂಡದಲ್ಲಿ ಸ್ನಾನಮಾಡಿ ಅನ್ನಪಾನಾದಿಗಳನ್ನು ತ್ಯಜಿಸಿ, ಭಕ್ತಿಭಾವದಿಂದ ಕಪಿಲೇಶ್ವರನನ್ನು ಆರಾಧಿಸತೊಡಗಿದ. ಹೀಗಿರುವಲ್ಲಿ ನಾಲ್ಕನೆಯ ದಿನ ಪೀಡೆಗೊಳಗಾದವನಂತೆ ತೋರುವ ಏಳು ವರ್ಷದ ಬಾಲಕನೊಬ್ಬ ಅಲ್ಲಿಗೆ ಬಂದ. ಕುಷ್ಠರೋಗಿಯಾಗಿದ್ದ ಅವನ ಸ್ವರೂಪ ಅಸಹ್ಯವಾಗಿತ್ತು. ಆ ಬಾಲಕ ನಂದಭದ್ರನಿಗೆ ಆವರಿಸಿದ್ದ ಮೋಹವನ್ನು ಹೋಗಲಾಡಿಸಿ ಧರ್ಮೋಪದೇಶ ಮಾಡಿದ. ಧರ್ಮರಹಸ್ಯವನ್ನೆಲ್ಲ ತಿಳಿಸಿ, ತನ್ನ ಪೂರ್ವವೃತ್ತಾಂತವನ್ನೂ ಹೇಳಿದ. ಮುಂದಿನ ಏಳು ದಿನಗಳಲ್ಲಿ ದೇಹ ತ್ಯಾಗಮಾಡಿದ ಆ ಬಾಲಕನಿಗೆ ಅವನ ಇಚ್ಛೆಯಂತೆ ನಂದಭದ್ರ ಬರ್ಕರಿಕಾ ತೀರ್ಥದಲ್ಲಿ ಸಂಸ್ಕಾರಮಾಡಿ, ಆ ಸ್ಥಳದಲ್ಲಿ ಅವನ ಹೆಸರಿನಲ್ಲಿ ಸೂರ್ಯಬಿಂಬವನ್ನು ಸ್ಥಾಪಿಸಿದ. ಆ ಮೂರ್ತಿಗೆ ಬಾಲಾದಿತ್ಯ ಎಂಬ ಹೆಸರಾಯಿತು. ಮುಂದೆ ನಂದಭದ್ರ ಮನೆಗೆ ಹಿಂತಿರುಗೆ ಮದುವೆಯಾಗಿ ಅನೇಕ ಮಕ್ಕಳನ್ನು ಪಡೆದು ಮುಪ್ಪಿನಲ್ಲಿ ಶಿವಸಾಯುಜ್ಯವನ್ನು ಸೇರಿದ.
(ಸಿ.ಎನ್.ಎಸ್‍ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ